ಪರ್ಜನ್ಯೇಷ್ಟಿ
	ದೇಶದಲ್ಲಿ ಮಳೆ ಬೀಳದೆ ಕ್ಷಾಮಬಾಧೆ ಉಂಟಾದಾಗ ಮಳೆಗಾಗಿ ಮಾಡುವ ಒಂದು ಯಾಗ. ಇದು ಒಂದು ಕಾಮ್ಯೇಷ್ಟಿ. ಇದನ್ನು ಕಾರೀರಿಷ್ಟಿ ಎಂದೂ ಕರೆವುದಿದೆ. 

	ಮಳೆ ಬೀಳುವಂತೆ ಮಾಡುವುದಕ್ಕಾಗಿ ಇತ್ತೀಚಿಗೆ ನೀರಿನಲ್ಲಿ ನಿಂತು ಋಗ್ವೇದ ಯಜುರ್ವೇದಗಳಲ್ಲಿ ಉಕ್ತವಾಗಿರುವ ಮಂತ್ರಗಳಿಂದ ವರುಣ ದೇವರ ಪ್ರಾರ್ಥನೆಯನ್ನು ಒಂದು ಮಂಡಲಕಾಲ ಎಂದರೆ-48 ದಿನಗಳ ಕಾಲ-ವಿಧಿವತ್ತಾಗಿ ನಡೆಸುತ್ತಾರೆ. ಇದೇ ಪರ್ಜನ್ಯಜಪ.

	ಇದಲ್ಲದೆ ಮಳೆ ಬೀಳುವಂತೆ ಮಾಡುವ ಮತ್ತೊಂದು ವಿಧಿ ಈ ರೀತಿ ಇದೆ-
ನದಿತೀರದಲ್ಲಿರುವ ದೇವಾಲಯದಲ್ಲಿ ವೇದಿಕೆಯನ್ನು ನಿರ್ಮಿಸಿ ಅದರ ಮೇಲೆ ಪೂರ್ವಾಭಿಮುಖವಾಗಿ ಕುಳಿತು ಮೇಘವನ್ನು ಅವಾಹನೆ ಮಾಡಬೇಕು. ಅಷ್ಟದಳ ಪದ್ಯವನ್ನು ಬರೆದು ಅದರಲ್ಲಿ ಪೂರ್ವದಿಂದ ಪ್ರಾರಂಭಿಸಿ ಪ್ರದಕ್ಷಿಣವಾಗಿ ಪರ್ಜನ್ಯ, ಮೇಘದೂತ, ಕಮಲೋದ್ಭವ, ಮಹಾನೀಲರಾಜ, ನಂದೀಕೇಶ್ವರ, ಸಿಂಹರಾಜ, ಕುಂಭರಾಜ, ನಂದರಾಜ ಈ ಎಂಟು ಮಂದಿಯನ್ನು ಆಹ್ವಾನಿಸಿ, ಆರಾಧಿಸಿ ಶಾಸ್ತ್ರೋಕ್ತ ಪೂಜಾಕ್ರಮದಲ್ಲಿ ಷೋಡಶೋಪಚಾರಗಳನ್ನು ಸಮರ್ಪಿಸಿ ಅನಂತರ ನಿವೇದನ ಮಾಡಬೇಕು. ಬಳಿಕ ಹೋಮಕುಂಡವನ್ನು ನಿರ್ಮಿಸಿ ಗುಗ್ಗಳ, ಗಂಧ ಅಗರು, ದೇವಗಣಿಗಿಲೆ ಹೂವು, ಘೃತ ಮಧು ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಹೋಮದ್ರವ್ಯವನ್ನು ಸಿದ್ಧಪಡಿಸಿಕೊಂಡು ಮುಂದೆ ತಿಳಿಸುವ ಎಂಟುಮಂತ್ರಗಳಿಂದ ಒಂದೊಂದು ಮಂತ್ರಕ್ಕೂ 108 ಸಲದಂತೆ ಹೋಮ ಮಾಡಬೇಕು.

	1 ಓಂ, ಹ್ರೀಂ, ಪರ್ಜನ್ಯಾಯ ಮೇಘರಾಜಾಯ ನಮಃ ಆಗಚ್ಛ ಆಗಚ್ಛ -ಸ್ವಾಹಾ
	2 ಓಂ, ಹ್ರೀಂ, ಮೇಘದೂತಾಯ ನಮಃ ಆಗಚ್ಛ ಆಗಚ್ಛ _ಸ್ವಾಹಾ
	3 ಓಂ, ಹ್ರೀಂ, ಕಮಲೋದ್ಭವಾಯ ನಮಃ ಆಗಚ್ಚ ಆಗಚ್ಛ- ಸ್ವಾಹಾ
	4 ಓಂ, ಹ್ರೀಂ, ಮಹಾನೀಲರಾಜಾಯ ಹಿಮವದ್ವಾಸಿನೇ ಮೇಘರಾಜಾಯ ಆಗಚ್ಛ ಆಗಚ್ಛ-ಸ್ವಾಹಾ
	5 ಓಂ, ಹ್ರೀಂ, ನಂದಿಕೇಶ್ವರಾಯ ಜಠರನಿವಾಸನೇ ಮೇಘರಾಜಾಯ ನಮಃ ಆಗಚ್ಛ ಆಗಚ್ಛ_ಸ್ವಾಹಾ
	6 ಓಂ, ಹ್ರೀಂ, ಸಿಂಹಾರಾಜಾಯ ಕೈಲಾಸವಾಸಿನೇ ಮೇಘರಾಜಾಯ ನಮಃ ಆಗಚ್ಚ ಆಗಚ್ಛ-ಸ್ವಾಹಾ
	7 ಓಂ, ಹ್ರೀಂ, ಕುಂಭರಾಜಾಯ ವಾಮಶೃಂಗಮೇರು ನಿವಾಸಾಯ ಮೇಘ ರಾಜಾಯ ನಮಃ ಆಗಚ್ಛ 		ಆಗಚ್ಛ-ಸ್ವಾಹಾ
 	8 ಓಂ, ಹ್ರೀಂ, ನಂದರಾಜಾಯ ದಕ್ಷಿಣಶೃಂಗ ಮೇರು ನಿವಾಸಾಯ ಮೇಘರಾಜಾಯ ನಮಃ ಆಗಚ್ಛ  
 ಆಗಚ್ಛ-ಸ್ವಾಹಾ

	ಈ ಮಂತ್ರಗಳಿಂದ ಹೋಮ ಮಾಡಿದ ಬಳಿಕ ಹೊಕ್ಕಳುವರೆಗಿನ ನೀರಿನಲ್ಲಿ ನಿಂತು ಕೊಂಡು ಮೇಲಿನ ಮಂತ್ರಗಳನ್ನು 108 ಬಾರಿ ಆವರ್ತಿಸಿ ಜಪಿಸಬೇಕು. ಈ ವಿಧಿಯನ್ನು 12 ದಿವಸಗಳು ಆಚರಿಸಿದಲ್ಲಿ ಮಳೆ ಬರುವುದು ಖಂಡಿತ.
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ